Tuesday, December 7, 2010

ಮೌನದ ಮನೆ ಸೇರಿದಾಗ....

ಮನದ ಹಕ್ಕಿ 
ರೆಕ್ಕೆ ಬಿಚ್ಚಿ 
ಹಾರಬಯಸಿದೆ..
ನೋಟದಲ್ಲೇ  ಮುದ್ದುಗರೆವ 
ಗೆಳೆಯನಪ್ಪುಗೆ
ಬಯಸಿದೆ..
ಬಾಂದಳದ ಚಂದ್ರ 
ನಮ್ಮನೋಡಿ 
ನಕ್ಕಂತೆನಿಸಿದೆ..
ಅಲೆ ಅಲೆಯಾಗಿ 
ಬೀಸೋ ಗಾಳಿ 
ಏನೋ ಹೇಳಿದಂತಿದೆ..
ಜಾಜಿ ಹೂವು ಪಾರಿಜಾತ 
ಬಿರಿದು 
ಹಾರೈಸಿದಂತಿದೆ.. 
ಬೆರಳುಗಳೊಳಗೆ 
ಬೆರಳ ಬೆರೆಸೆ
ಪ್ರೀತಿ ಮಾತು ಮೂಡಿದೆ..
ದೂರದಿಂದ 
ಕೇಳುತಿಹ  ಹಾಡು 
ಮಧುರವಾಗಿದೆ..
ಅರಳುತಿರುವ 
ಮಲ್ಲೆ ಮೊಗ್ಗು ಈ 
ಖುಷಿಯ ಜೊತೆಗಿದೆ.. 
ನಿನ್ನ ತೋಳ 
ಬಂಧಿಯಾಗೆ 
   ಮೌನ ಮನೆಯ ಮಾಡಿದೆ..

Tuesday, October 19, 2010

ಏತಕೆ ಈ ಮೌನ..???



                                                      ಮನದ ಮಂದಿರದಲ್ಲಿ ಮೀಟುವೆ ನಾದವ
                                            ಮೊಗದಲ್ಲೇಕೆ ಈರೀತಿ ಮೌನ....
                                            ತಂತಿಯು ನುಡಿಸುತಿರಲು ರಾಗವ 
                                            ಹಾಡಲಾರೆಯಾ ಒಂದು ಕವನ...

                                                   ನಿನ್ನ ಕಣ್ಣ ಓರೆ ನೋಟ
                                                   ನೀಳ ಮೂಗು ಎಂತ ಮಾಟ...
                                                   ಮುಂಗುರುಳ ಅಲೆದಾಟ
                                                   ಮನದಲ್ಲಿ ತೊಳಲಾಟ...
            
                                             ತಲೆಯಲ್ಲಿ ಹಣ್ಣ ಬುಟ್ಟಿ
                                             ಎಲ್ಲೋ ನೋಡುವ ನಿನ್ನ ದಿಟ್ಟಿ...
                                             ನುಡಿಸುತಿರಲು ನೀ ತಂಬೂರಿ
                                             ಕುಣಿಯುತಿದೆ ಮನದ ಮಯೂರಿ...

Wednesday, October 6, 2010

ಯಾರು???


ಎಲ್ಲಾ ವಿಸ್ಮಯವು, ಸೋಜಿಗವು ಈ ಜಗದ ಒಳಗೆ...

ಮೂಡುವ ಸೂರ್ಯಗೆ ಬಣ್ಣವ ಬಳಿದವರಾರು?
ಹಾರುವ ಹಕ್ಕಿಗೆ ಹಾಡುವುದ ಕಲಿಸಿದವರಾರು?
ಮರದಲಿರುವ ಹಣ್ಣಿಗೆ ಸಿಹಿಯ ತುಂಬಿದವರಾರು?
ಹರಿವ ನೀರಿಗೆ ಕಲರವದ ದನಿ ಕೊಟ್ಟವರಾರು?

ಚೆಂದದ ಹೂವಿಗೆ ಸುವಾಸನೆಯ ನೀಡಿದವರಾರು?
ಹುಣ್ಣಿಮೆಯಲಿ ಆಗಸಕೆ ಚಂದಿರನ ಕಳಿಸಿದವರಾರು?
ಮೀನಿಗೆ ನೀರಿನಲಿ ಈಜುವುದ ಹೇಳಿಕೊಟ್ಟವರಾರು?
ದುಂಬಿಗೆ ಹೂವ ತೋರಿಸಿ ಕೊಟ್ಟವರಾರು?

ನೀಲಾಕಾಶದಿ ಮೋಡಗಳ ನಿಲ್ಲಿಸಿ ಬಂದವರಾರು?
ಪುಟ್ಟ ಕರುವಿಗೆ 'ಅಂಬಾ' ಎನ್ನುವುದ ಹೇಳಿಕೊಟ್ಟವರಾರು?
ಗಿಡದ ಮೊಗ್ಗನ್ನು ಬಂದು ಅರಳಿಸಿ ಹೋದವರಾರು?
ಬಣ್ಣದ ಚಿಟ್ಟೆಗೆ ಹಾರುವುದ ಕಲಿಸಿದವರಾರು?

ತೆಂಗಿನ ಕಾಯಲಿ ನೀರನು ತುಂಬಿ ಇಟ್ಟವರಾರು?
ಕೋಗಿಲೆಗೆ ಸುಂದರ ಧ್ವನಿಯ ನೀಡಿದವರಾರು?
ಮರಗಳಿಗೆ ಹಸಿರು ಎಲೆಯ ಜೋಡಿಸಿದವರಾರು?
ನನಗೆ ಇದಕ್ಕೆಲ್ಲ ಉತ್ತರವ ತಿಳಿಸುವವರಾರು?




Wednesday, September 22, 2010

ಮೊಗ್ಗಿನ ಮನಸುಗಳು..

ಹಾಯ್..


ಹಲೋ..



  ಏನ್ಮಾಡ್ತಾ ಇದೀಯಾ ?


 ಫೋಟೋ ನೋಡ್ತಿದ್ದೆ..


ಏನಾದ್ರು ಆಡೋಣ್ವಾ ?

ಸರಿ, ಎಲ್ಲಾರ್ನು ಕರಿತೀನಿ..   


 ಎಲ್ರೂ ಬನ್ನಿ ... ಆಡೋಣ ...

 ಯಾವ  ಆಟನೇ? 


ಜೂಟಾಟ ಆಡೋಣ್ವಾ ? 


 ಹಮ್.. ಸರಿ..


ಏಯ್, ಇಲ್ನೋಡ್ರೋ... ಏನೋ ಇದೆ ಇಲ್ಲಿ..


ಅಯ್.. ಎಷ್ಟ್ ಮಜ ಇದೆ ಅಲ್ವಾ?! ಎಷ್ಟೊಂದ್ ಕಾಲಿದೆ ಇದಕ್ಕೆ.. 



 ಅದರ ಮೇಲೆ ಹಾಕ್ಲಾ  ಇದನ್ನ? ..


ಬೇಡ.. ಅದಕ್ಕೆ ಚೊರಟೆ  ಅಂತಾರೆ.. ಅದು ಏನು ಮಾಡಲ್ಲ..
ನೋಡಿ ಈಗ ಚಕ್ಲಿ ಮಾಡ್ತೀನಿ ಅದನ್ನ..



 ಹಹಹಹ.. ಚೊರಟೆ ಚಕ್ಲಿ...



 ನನ್ಗೆ ಭಯ ಆಗ್ತಿದೆ , ಬಾರಣ್ಣ ಇಲ್ಲಿ...



 ಹೆದರಬೇಡ ... ಏನು ಮಾಡಲ್ಲ ಅದು..


ಏನಿದೆ ಅಲ್ಲಿ ನಾನು ನೋಡ್ಬೇಕು..


ಬರ್ತೀಯಾ?


ಬೇಡ.. ಅಮ್ಮ ಬೈತಾರೆ..


ನನಗೇ ಭಯ.. ಅವ್ನ್ ಬರ್ತಾನಂತೆ..


ನನ್ ಕರ್ಕೊಂಡ್ ಹೋಗಲ್ವಾ? ನಿಲ್ಲಿ ಮಾಡ್ಸ್ತೀನಿ..


 ಅಯ್ಯೋ... ಕಾಲಿಗೆನೋ ತಾಗಿದೆ...


ಕಾಲ್ ತೊಳ್ಕೋ ಬರ್ತೀನಿ...


ನಾವೆಲ್ಲಾ ಅಡ್ಕೊಳೋಣ.. ಅವ್ಳು ಹುಡ್ಕ್ಲಿ..


ಎಲ್ಲಾ ಎಲ್ಲಿಗ್ ಹೋದ್ರು ? 



ಅಡ್ಕೊಂಡಿದೀರಾ..?  ಹುಡ್ಕ್ತೀನಿ ತಾಳಿ...


ನಾನ್ ಇಲ್ಲಿದೀನಿ ಅಂತ ಹೇಳ್ಬೇಡ..



ಆಯ್ತು.. ನನ್ನು ಆಟಕ್ಕೆ ಸೇರ್ಸ್ಗೋಳಿ ...


ಎಲ್ಲೋ ಮಾತ್ ಕೇಳ್ತಿದೆ...


ಹಹಹ... ಸಿಕ್ಬಿದ್ದ..


ಪ್ಚ್ಕ್..  ಎಲ್ಲಾರ್ನು ಹುಡ್ಕು..


ನಾನಂತು ಸಿಗಲ್ಲ...


ಹಿಡ್ಕೊಡ್ಲಾ ?


ಹಾಗಿದ್ರೆ ನೀನ್ ಬೇಡ ಆಟಕ್ಕೆ...


ಹೆಹೆ... ನಾನೇ ಹುಡ್ಕ್ದೆ..  ಹೇಗೆ?


ಬಾರೋ... ಬೇರೆ ಆಟ ಆಡ್ತೀವಿ ಈಗ...


ಇಲ್ಲೇ ಇದ್ದಿದ್ಯಾ ನೀನು?


ಯಾಕೆ ಬೇರೆ ಆಟ? ನಾನ್ ಬರಲ್ಲ.. 
ಮನೆಗ್ ಹೋಗ್ತೀನಿ.....




 ಅಲ್ನೋಡೋ ಪಾಪುನಾ... 




 ಹೇಗಿದೆ ಗೆಟಪ್ಪು?



ಉಮ್ಮ್ಮ್ಮ್.... ಸಖತ್ ಮಿಂಚಿಂಗು... 



ಮತ್ತೀಗ ?


ಎಲ್ಲರಿಗೂ ಮನೇಲಿ ಕರೀತಿದಾರೆ ...
ನಡೀರಿ ಹೋಗೋಣ... ಟಾಟಾ..


ಟಾಟಾ... ನಾಳೆ ಮತ್ತೆ ಆಡೋಣ .... 

Wednesday, September 1, 2010

ಶ್ರೀ ಕೃಷ್ಣಾರ್ಪಣಮಸ್ತು....


ಅಂಬೆ ಕಾಲಿಕ್ಕುತ ಬಂದ
ಕೈಯ್ಯಲಿ ಕೊಳಲು ನೋಡಲು ಚೆಂದ
ಉಟ್ಟಿಹ ಪೀತಾಂಬರ ಅಂದವೋ ಅಂದ
ಇವನೇ ನಮ್ಮ ಬಾಲ ಮುಕುಂದ...
     
      ಶಿರದಲಿ ಶೋಭಿಪ ನವಿಲುಗರಿ
      ನೀಲ ವರ್ಣ ನಮ್ಮ ಮುರಾರಿ
      ಹಣೆಯಲಿ ತಿಲಕ ಕಾಲಲಿ ಗೆಜ್ಜೆ
      ಬರುವನು ಇಟ್ಟು ಪುಟ್ಟ ಹೆಜ್ಜೆ... 

ನವನೀತ ಚೋರ ಈ ಪುಟ್ಟ ಪೋರ
ಮಾಡುವ ಮೋಡಿಯ ತುಂಟ ಕುಮಾರ
ದೇವಕಿ ಯಶೋಧರ ಮುದ್ದಿನ ಕುವರ
ಬಾಲ ಲೀಲೆಯು ಇವನದತಿ ಮಧುರ...
     
      ಕೃಷ್ಣ ಗೋವಿಂದ  ಗೋಪಾಲನು ಇವನೆ
      ಭಕ್ತಿಲಿ ಬೇಡಲು ತೋರುವ ಕರುಣೆ...
      ಮಾಡುವ ಇವನ ದಿನವು ಸ್ಮರಣೆ
      ಪರಿಹರಿಸುವ ಇವ ನಮ್ಮಯ ಬವಣೆ...

ಹರೇಕೃಷ್ಣ  ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
       || ಶ್ರೀ ಕೃಷ್ಣಾರ್ಪಣಮಸ್ತು....||