Thursday, December 8, 2011

ಪುಟ್ಟಿಯ ತಂಟೆ..

ಇವಳು ನಮ್ಮ ಮಗು...

ಏಳುವಾಗ ಮೊಗದಲ್ಲಿ ನಗು
ಜೊತೆ ಜೊತೆಯೇ ಕೇಕೆ ಕೂಗು..

ಇವಳಿಗಿಷ್ಟ ಎಣ್ಣೆಯ ಮಾಲಿಶ್
ಬೇಸರದಿ ಇದ್ದಾಗ ಮಾಡುವಳು ಪಾಲಿಶ್..

ತಲೆ ಮುಟ್ಟಿದರೆ ಬರುವುದು ಕೋಪ
ಸ್ನಾನ ಮಾಡುವಾಗ ಅಳುತ್ತಾಳೆ ಪಾಪ..

ಮುಖದಿ ತೋರುವಳು ವಿಧ ವಿಧದಾ ಭಾವ..
ನಗುವಾಗ ಇವಳು ಮಲ್ಲಿಗೆ ಹೂವ..

ಕವುಚಿ ಹಾಕಿದಾಗ ಜೋರು ಇವಳ ಕೂಗಾಟ..
ಎತ್ತಲು ಹೋದರೆ ಮಾಡುವಳು ರಂಪಾಟ..

ಕುಣಿಯುತ್ತಲೇ ಇರುವುದು ಪುಟ್ಟ ಕೈ ಕಾಲು..
ಕಾಲಲ್ಲೇ ಆಡುವಳು ಕೆಂಪನೆಯ ಬಾಲು..

ರೆಪ್ಪೆಯಾಡಿಸದೆ ನೋಡುವಳು ತಿರುಗುವ ಫ್ಯಾನು
ಬೇಕಂತೆ ಕೈಯ್ಯಲ್ಲಿ ಮೊಬೈಲ್ ಫೋನು..

ಮಾಂಗಲ್ಯದೊಡನೆ ಏನಿವಳ ಆಟ..
ತಪ್ಪಿಸಲು ಕೈ ಸಿಡುಕಿನ ನೋಟ..

ನಿಲ್ಲಿಸಿದರೆ ಮಾಡುವಳು ವಿಪರೀತ ಡೌಲು..
 ಪಪ್ಪ ಬರಲು ಏರುವಳು ಕಾಲು..
   
ಶುರುಮಾಡುವಳು ರಗಳೆ ಬರಲು ನಿದಿರೆ..
ಕಣ್ಣ ತುಂಬಿಳಿಯುವುದು ನೀರಧಾರೆ..

ಮಾಡುತ್ತಲೇ ಇರುವಳು ಏನಾದರೂ ತಂಟೆ..
ಸಾಲದು ದಿನದ ಇಪ್ಪತ್ನಾಲ್ಕು  ಗಂಟೆ..

ಇವಳು ನಮ್ಮ ಮಗು..
ಶುರುವಾಯಿತು ಇವಳ ಕೂಗು..

Tuesday, September 20, 2011

ಮರಳಿ ಬ್ಲಾಗಿಗೆ...

ತುಂಬಾ ದಿನಗಳ ನಂತರ ಹೊಸ ಕನಸಿನೊಂದಿಗೆ ಬ್ಲಾಗಿಗೆ ಮರಳುತ್ತಿದ್ದೇನೆ... ನಿಮ್ಮ ಸಹಕಾರ ಮೊದಲಿನಂತೆಯೇ ಇರಲಿ...

ನವ ಮಾಸ ಉದರದಲಿ
ಬೆಚ್ಚಗೆ ಮಲಗಿದ್ದು
ಹೊಸ ಆಸೆ ಹೊಮ್ಮಿಸುತ
ನಸು ನಗುತ 
ನೀ ಬರಲು...
ನಮ್ಮ ಕನಸುಗಳು
ನಿನ್ನ ಆಟಗಳೊಡನೆ
ಕೇಕೆಗಳೊಡನೆ 
ನನಸಾಗಲಿ...
ನಿನ್ನ ನಗು
ಹೀಗೆಯೇ ಹೊಮ್ಮಿರಲು
ಎಲ್ಲರ ಆಶೀರ್ವಾದ
ನಿನಗಿರಲಿ...  
      

Saturday, February 26, 2011

ನಾನೇನ ನೀಡಲಿ ಗೆಳೆಯಾ??

ಚಿತ್ರಕೃಪೆ: ಅಂತರ್ಜಾಲ

ಗೆಳೆಯಾ..

ನೀ ನೀಡಿದ ಮುತ್ತಿನ ಮಳೆಗೆ
ನಾ  ಏನ ನೀಡಲಿ ಕೊಡುಗೆ..?

ಬಾಳ ಬಂಡಿಯಲಿ ಜೊತೆಯಾದ ಸುಂದರ
 ಮನಸಿನ ಮಂದಿರಕೆ ನೀನಾದೆ ಸರದಾರ..


ಹರಿಸಿದೆ ಪ್ರೇಮದ ಮಹಾಪುರ
 ಪೋಣಿಸಿದೆ ಆಸೆಯ ನೂಪುರ..

ಹಾಲು ಜೇನಂಥ ಅನುಬಂಧವ ಬೆಸೆದೆ
  ಕನಸಿಗೆ ಕನಸ ಜೊತೆಯಲ್ಲೇ ಹೊಸೆದೆ..

ಕಣ್ಣಲ್ಲಿ ಕಣ್ಣಿಟ್ಟು ಹರಿಸಿದೆ ಒಲವ
  ಭಾವನೆಗಳ ಪೋಷಿಸಿದ ಚೆಲುವ..

ಜೀವನದ ಹಾದಿಗೆ ನೀ ಹಾಸಿದೆ ರತ್ನಗಂಬಳಿ
     ಹೇಳು ನಾನೇನ ನೀಡಲಿ ನಿನಗಾಗಿ ಬಳುವಳಿ..?