Friday, September 21, 2018

ರಂಗವಲ್ಲಿ

ಚುಕ್ಕಿಯದುವೆ ಕೈಯ ತಪ್ಪಿ
ಹೆಚ್ಚುಕಡಿಮೆಯಾಗಿದೆ
ಎಳೆದ ಗೆರೆಯು ಮೇಲೆ ಹೋಗಿ
ರಂಗವಲ್ಲಿ ಕೆಟ್ಟಿದೆ..

ಗಾಳಿ ಬಿರ್ರನೆಂದು ಬೀಸಿ
ಪುಡಿಯು ಹಾರಿ ಹೋಗಿದೆ
ಬಣ್ಣ ಹಾಕುವಾಸೆಯು
ಮನದಿ ದೂರವಾಗಿದೆ..

ರಂಗವಲ್ಲಿ ಅಳಿಸಲಾರೆ
ಬೇರೆದೊಂದ ಹಾಕಲಾರೆ
ಮನವು ಕರಡಿ ಹೋಗಿದೆ
ಆಸೆ ಚಿರುಟಿ ಕರಟಿದೆ..

ಮಳೆಯು ಬಂದು ರಂಗವಲ್ಲಿ
ತಾನೆ ಅಳಿಸಿ ಹೋಗಲಿ
ನಾಳೆ ಬೇರೆ ಬಣ್ಣ ಬೆರೆಸಿ
ಹಾಕುವಾಗ ಖುಷಿಯ ನೀಡಲಿ..

ಮನವು ತಾನೆ ತಾನಾಗಿ
ಸಮಾಧಾನ ಹೊಂದಲಿ
ಹೊಸತು ಹುರುಪಿನಿಂದ
ದಿನವು ಶುಭವಾಗಲಿ ..


Friday, March 31, 2017

ಕಾರಂಜಿ

ಅಲಂಕಾರಕ್ಕೆ ಹೀಗೊಂದು ಪ್ರಯತ್ನ..

Friday, January 22, 2016

ಧಿಕ್ಕಾರ ಹಂತಕರೆ...




ಮರೆಮಾಚಿ ಮೊಗವನ್ನು
ಏಕೆ ಕರೆದೊಯ್ಯುವಿರಿ
ತಿಳಿಯಲಿ ಜಗಕೆ ಇವರ ಬಣ್ಣ......

ಕಪ್ಪ ಮುಸುಕಿನಲಿ
ಮುಖವನ್ನು ಅಡಗಿಸಿ
ಕಾಣಿಸುವಿರೇಕೆ ಎರಡು ಕಣ್ಣ......

ಜನರ ನಡುವಲ್ಲೇ ಇದ್ದು
ರಕ್ತ ತರ್ಪಣವ ಗೈದು
ಮಾಡಿಹರು ನೆಮ್ಮದಿಯ ಮರೀಚಿಕೆ....

ಕಳೆಯಲಿ ಇಂತಹ ಕಳೆ
ತೊಲಗಲಿ ಅಶಾಂತಿಯ ಕೊಳೆ
ದೂಡಿರಿ ಇವರ ನರಕದಾಚೆಗೆ.....

ಜಾತಿಯ ಕಥೆಗಳು ಬೇಡ
ವಿದ್ಯಾವಂತರೆಂಬ ಬಿರುದು ಬೇಡ
ಹಂತಕರೆಂದರೆ ಹಂತಕರೇ.....

ಏರಿಸಿ ನೇಣಿಗೆ ಬಹಿರಂಗವಾಗಿ
ಹೋಗಲಿ ಉಗ್ರರು ನಾಶವಾಗಿ
ಯೋಚಿಸಿ ಒಮ್ಮೆ ಚಿಂತಕರೆ...


 

Sunday, January 17, 2016

ಕಟ್ಟುವೆನೊಂದು ಹೊಸ ಲೋಕ....

ಮನಸೆಂಬ ಮಗುವು
ಹಠಮಾಡಿ ಅಳುತಿಹುದು
ಹೇಗೆ ಸಮಾಧಾನಿಸುವುದದನು...

ಆಟಿಗೆಯ ಕೊಡಲು
ಬೇಸರದಿ ಎಸೆಯುವುದು
ಏನು ಬೇಕೆಂದು ಹೇಳಲದಕೆ ಬಾರದು...

ಹಸಿವಿರಬೇಕೆಂದು
ಇಷ್ಟ ಫಲವ ನಾ ನೀಡೆ
ನಿರಾಕರಿಸುವುದದನು ಈಗ ಬೇಡೆಂದು...

ಬಗೆ ಬಗೆಯ ರೀತಿಯಲಿ
ರಮಿಸಿ ಮುದ್ದನು ಮಾಡಿ
ಒಳ ಬೇಗೆ ಹೊರಬರಲು ಕಾಯುತಿಹೆನು...

ನಗುವಿನಲಿ ಕೇಕೆಹಾಕಲು
ಆಟ ಪಾಠದಿ ಜಗವ ಮರೆಯಲು
ಲೋಕವೊಂದ ನಾ ಕಟ್ಟ ಬಯಸಿಹೆನು...

Thursday, December 31, 2015

ಹೊಸವರ್ಷ ತರಲಿ ಹೊಸಹರ್ಷ

Happy new year!  Happy new year! ಅಂತ ಎಲ್ಲಾ Whatsapp ಗುೃಪ್ ಗಳಲ್ಲಿ message ಬರ್ತಾ ಇರ್ವಾಗ ಒಂದು ಗೃಪ್ನಲ್ಲಿನ ಸದಸ್ಯರೊಬ್ರು "ಅದು ಪಾಶ್ಚಾತ್ಯರ ಆಚರಣೆ. ನಮಗೆ ಯುಗಾದಿಯೇ ಹೊಸವರ್ಷ"  ಅಂತ ಹೇಳಿದ್ರು. ಅದು ತಪ್ಪು ಅಂತ ಹೇಳ್ತಿಲ್ಲ.. ಆದ್ರೆ ಖುಷಿಯಾಗಿರ್ಲಿಕ್ಕು ಈತರ ಬಿಗುಮಾನ ಯಾಕೆ? ನಾವು ಅವ್ರಂತೆ ಪಾನಮತ್ತರಾಗಿ ಅಪರಾತ್ರಿಯಲ್ಲಿ ಅರೆಬಟ್ಟೆಯಾಗಿ ಆಚರಿಸೋದು ಬೇಡ. ಒಂದು ಸುಂದರ ಶುಭಾಷಯವನ್ನು ಪ್ರೀತಿಪಾತ್ರರಿಗೆ ಹೇಳುವ ಮೂಲಕ ಆಚರಿಸೋಣ. ಮನೆಲ್ಲಿ ಸಿಹಿತಿಂಡಿಯನ್ನು  ಮಾಡಿ ತಿನ್ದು ಆಚರಿಸೋಣ. ಹೊಸ ವರ್ಷದ ನೆವದಲ್ಲಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳೋ ಮೂಲಕ ಆಚರಿಸೋಣ.
ಜನವರಿಯಿಂದ ಡಿಸೆಂಬರ್ ವರೆಗಿನ ಕ್ಯಾಲೆಂಡರ್ ಅನ್ನೇ ಯಾವುದೇ ಬದಲಾವಣೆ ಇಲ್ಲದಂತೆ ಬಳಸ್ತಿರುವಾಗ ಸ್ನೇಹಿತರ ಜೊತೆ ಸಂಬಂಧಿಕರ ಜೊತೆ ಶುಭಾಷಯ ವಿನಿಮಯ ಮಾಡಿಕೊಳ್ಳಿಕ್ಕೆ ಬಿಗುಮಾನ ಯಾಕೆ?? ಯುಗಾದಿಯನ್ನು ಇದಕ್ಕಿಂತ ಜೋರಾಗಿ ಆಚರಿಸಿದರಾಯ್ತು.. ಏನಂತೀರ..

ಎಲ್ಲರಿಗೂ ಹೊಸವರ್ಷ೨೦೧೬ ರ ಶುಭಾಷಯಗಳು...

Thursday, October 1, 2015




ಗೋಡೆಗೊಂದು ಚಿತ್ತಾರ

Friday, August 14, 2015

ಬೇಕು

ಇದು ಬೇಕುಗಳ ಲೋಕ
ಸಾಕು ಎಂಬುದಿಲ್ಲಿ ಮರೀಚಿಕೆ

ಮಗುವಿಗೆ ಹೆತ್ತವರ ಮಮತೆ ಸಾಕೆನಿಸುವುದೆ?
ಆಟಿಗೆಯು ಹೆಚ್ಚಿದೆ ಎಂದು ಎಂದಾದರೂ ಅನಿಸುವುದೆ...?
ತಾಯಿಗೆ ಮಕ್ಕಳು ಉಂಡಿದ್ದು ಹೆಚ್ಚೆನಿಸಲುಂಟೆ?
ಹಾಗೆಯೇ ಗಂಡನ ಪ್ರೀತಿಯು!

ಬೆಳೆ ಬೆಳೆವ ರೈತರಿಗೆ ಫಸಲು ಸಾಕೆನಿಸುವುದೇ?
ಕೊಳ್ಳೆ ಹೊಡೆವ ಚೋರನಿಗೂ ಇನ್ನು ಬೇಕೆಂದೆನಿಸದೇ?
ಮಲೆನಾಡ ವೃದ್ಧರಿಗೆ ಈಗಿನ ಮಳೆ ಹೆಚ್ಚೆಂದೆನಿಸುವುದೆ?
ಹಾಗೆಯೇ ಲೋಕದ ನೀತಿಯು...

ಜಗದೊಳಗೆ  ತನಗಿರುವ ಸಂಪತ್ತು  ಸಾಕೆನ್ನುವರುಂಟೆ?
ರಾಜಕಾರಿಣಿಯು ಸೀಟೆನಗೆ ಬೇಡವೆನ್ನುವನೇ? 
ಮನದೊಡತಿ ಯೊಡನಿರಲು ಸಮಯ ಸಾಕೆನಿಸುವುದುಂಟೇ
ಇದೇ ಪ್ರೀತಿಯ ರೀತಿಯು...

Sunday, July 19, 2015

ಹಾಗೆ ಸುಮ್ಮನೆ

 ಬಾಡದ ತೋರಣ.. ಚಿಪ್ಪಿನ ಓರಣ..
 ಬಣ್ಣದ ಚಿತ್ತಾರ..
Facebook ಅಲ್ಲ Face stick.. ;-)

ವಾರ್ಲಿಯದೊಂದು ಚಿತ್ತಾರ..

     ತುಂಬಾ ದಿನಗಳಿಂದ ಬಣ್ಣ ಕಳೆದುಕೊಂಡು ಕುಳಿತಿದ್ದ ಬಿದಿರಿಗೆ ವಾರ್ಲಿಯ ಚಿತ್ತಾರ ಮೂಡಿದಾಗ..