Friday, July 30, 2010

ಕನಸು.....


ಮುಗ್ಧ ಮನದ 
ನಗ್ನ ಮಗುವೆ 
ಯೋಚಿಸುವೆ ಏನನು?
ಮುದ್ದು ಮುಖದ 
ಪುಟ್ಟ ತುಟಿಯಲಿ 
ನಗುವನೇಕೆ ಕಾಣೆನು? 
     ಕಣ್ಣಲಿಹುದು
     ನೂರು ಆಸೆ
     ಚಿಂತೆ ಏಕೆ ಮಾಡುವೆ?
     ನಾಳೆ ದಿನವು
     ನಿಂದೆ ಎಲ್ಲ
     ಖುಷಿಯ ನೀನು ಕಾಣುವೆ.
ಹಣೆಯಲಿಹುದು 
ಮೂರು ಬಣ್ಣ 
ಕೆಳಗೆ ಕಪ್ಪು ಚುಕ್ಕಿಯು.
ಮೈಯ ಮೇಲೆ
ಇರುವ ವರ್ಣ 
ಅದುವೆ ದೇಶಭಕ್ತಿಯು.
     ಕೆನ್ನೆಯಲ್ಲಿ
     ಬಣ್ಣವಿಹುದು
     ಇರಲಿ ನಗುವು ಅಲ್ಲಿಯೇ.
     ನಿನಗು ಕೂಡ
     ನಮಿಸಿ ಕೇಳ್ವೆ 
     ಇರಲಿ ದೇಶಪ್ರೇಮ ಹೀಗೆಯೆ.
(ತುಷಾರದಲ್ಲಿ ಪ್ರಕಟಿತ)

Monday, July 26, 2010

ಧರಣಿ ಇರುವುದೀಗ....




         ಕೊಟ್ಟು ಕೆಟ್ಟವರುಂಟು
         ಬಿಟ್ಟು ಸತ್ತವರುಂಟು     
         ಧರಣಿ ಇರುವುದೀಗ ಧನದ ಮೇಲೆ... 
         ಕೊಡದೆ ಕಳೆದವರುಂಟು
         ಬಿಡದೆ ಮಡಿದವರುಂಟು 
         ಮನುಜ ಇರುವುದೀಗ ಹಣದ ಮೇಲೆ...
ಆ ಕಾಲ ಒಂದಿತ್ತು
ಮನೆಯೆಲ್ಲ ತುಂಬಿತ್ತು
ಭಯ ಭಕ್ತಿ ಇದ್ದಿತ್ತು ಸರ್ವರಲ್ಲಿ...
ಸಹಬಾಳ್ವೆ ಅಲ್ಲಿತ್ತು 
ಪ್ರೀತಿಯ ಹಸಿವಿತ್ತು
ಗೌರವದ ನಯವಿತ್ತು ವೃದ್ಧರಲ್ಲಿ...
          ಈಗಿಲ್ಲ ಆ ಸತ್ವ
                       ಮರೆತರು ಮನುಷ್ಯತ್ವ
                       ವೃದ್ಧರಾ ಪಾಡು ಕೇಳ್ವರಿಲ್ಲ...
                       ಕೊಟ್ಟುಬಿಟ್ಟರು ಆಸ್ತಿ 

ಅದಕ್ಕಾಗಿಯೇ ಈಸ್ಥಿತಿ
ಸಿಕ್ಕಮೇಲ್ ಅವರ ಚಿಂತೆಯಿಲ್ಲ...
 

Thursday, July 22, 2010

ಮಲ್ಲಿಗೆ...


ಹಸಿರು ಗಿಡದ ಬಿಳಿಯ ಮಲ್ಲಿಗೆ
ಅವಿತು ಕುಳಿತಿರುವೆ ಏತಕೆ? 
ಯಾರಾದರೂ ಕೊಯ್ಯುವರೆಂಬ ಭಯವೇ?
ಅಥವಾ ಕೊರೆಯುವ ಚಳಿಯೇ?
     ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ 
     ನಿನ್ನೊಳೆಷ್ಟು ವಿಧ...
     ಅವುಗಳ ಪರಿಮಳದಲ್ಲೂ 
     ಎಷ್ಟೊಂದು ಭೇದ..
ಮಲ್ಲಿಗೆ ಬಳ್ಳಿ ಮನೆಗೆ ಶೋಭೆ 
ಮಲ್ಲಿಗೆ ಜಡೆ ನಾರೀಮಣಿಗೆ ಶೋಭೆ 
ನಡುಗದಿರು ಗುಡುಗದಿರು ವ್ಯರ್ಥವಾಗುವೆನೆಂದು
ಮುಡಿಯುವರು ನಲಿಯುವರು ಹೆಂಗಳೆಯರು ಇಂದು..
    ನೀನಾಗುವೆ ದೇವರಿಗೆ ಅಲಂಕಾರ 
    ಮಧುಮಗಳಿಗೆ ನಿನ್ನಿಂದಲೇ ಶೃಂಗಾರ 
    ಆದರೂ ನಿನಗಿಲ್ಲ ಅಹಂಕಾರ 
    ಅದಕ್ಕೇ ನೀನು ಮಂಗಳಕರ...

Wednesday, July 14, 2010

ಆರಂಕುಶವಿಟ್ಟೋಡಂ ನೆನೆವುದೆನ್ನ ಮನಂ ....



ನಮ್ಮೂರು ಬನವಾಸಿ
ಈಗಿಲ್ಲ ಇಲ್ಲಿ ವನರಾಶಿ..
        ಇಲ್ಲುಂಟು ದೇವಾಲಯ,
         ಅದೇ ಫೇಮಸ್ ಶಿವಾಲಯ..
         ಇಲ್ಲಿ ಆಳಿದ್ದಾರೆ ಚಾಲುಕ್ಯ, ಕದಂಬ,
         ಅದಕ್ಕೆ ಸಾಕ್ಷಿ ಕಲಾಕಂಬ...
 








ಇಲ್ಲಿ ಹರಿದದ್ದು ವರದಾ ನದಿ,
ಬೇಸಿಗೇಲಿ ಕಾಣೋದು ಹೊಳೆ ಬದಿ! 
ಇಲ್ಲಿದೆ ಪಂಪವನ,
ಈಗೀಗ ಆಗ್ತಿದೆ ಬೋಳುಬನ!
       
      



  

           ಪಂಪನಿಗೊತ್ತಿತ್ತು ಇಲ್ಲಿಯ ಮಹಿಮೆ,
           ಅದಕ್ಕೆ ಹೇಳಿದ್ದಾನೆ ಇದಕ್ಕೆ ಉಪಮೆ...

           ಇದಕ್ಕೆ ಬಿರುದು ದಕ್ಷಿಣ ಕಾಶಿ,
            ಕಾಶಿ ಕಾಣದವರಿಗೆ ಇದೇ ವಾಸಿ..  
ಬನ್ನಿರಿ ಬನವಾಸಿಗೆ,
ಶ್ರೀ ಮಧುಕೇಶನ ದರುಶನಕೆ...