Friday, January 9, 2015

ಕುಡಿಕಥೆ- ಕೋಪ

            ಅವಳು ಯಾವಾಗಲೂ ಹಾಗೆ... ಬೇಗ ಕೋಪಿಸಿಕೊಳ್ಳುತ್ತಾಳೆ.. ಅದೂ ಅಂತಿಂತ ಕೋಪವಲ್ಲ... ಭಯಂಕರ ಕೋಪ... ಅದಕ್ಕೇ ಅವಳ ಅಜ್ಜಿ ಹೇಳುತ್ತಿದ್ದುದು "ಅಪ್ಪನ ಸಿಟ್ಟೆಲ್ಲಾ ನಿನಗೇ ಬಂದಿದೆ" ಅಂತ... ಆ ಕೋಪಕ್ಕೆ ಅಂತಿಂತ ಕಾರಣವೇ ಇರಬೇಕೆಂದಿಲ್ಲ..." ನೀನು ಮಾಡಿದ್ದು ಸರಿಯಲ್ಲ" ಎಂದರೂ ಸಾಕು...
            ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ.

Monday, December 1, 2014

ಹರೆಯ


 ಹೊರಟಿತ್ತು ಸವಾರಿ
೭೦ ರ ಹರೆಯದ
ದಂಪತಿಗಳು..
ಬದುಕನ್ನು ಸವರಿ
ಎಷ್ಟೆಷ್ಟೋ ಮರೆಯದ
ಸಂಗತಿಗಳು.... 

ಹಿಂದೊಂದು ದಿನ
ಆತ ಕುಳಿತಿದ್ದ
ಅಂಗಳದಿ..
ಗುಲಾಬಿಯ ಮುಡಿದು
ಬಂದಳಾಗ ಆತನ
ಪ್ರಿಯ ಮಡದಿ....

ಇಂದು ವಿಶೇಷಕೆ
ಏನ ಮಾಡಲಿ
ಸಿಹಿಯ..
ಎಂದು ಕೇಳಲು
ಹೇಳಿದನವಳ
ಇನಿಯ....

ಇಂದಿಗೆ ಒಂದು
ವರುಷ
ನಮ್ಮ ಬಾಳಿಗೆ..
ನೀ ತಂದೆ
ಹರುಷ
ನನ್ನ ಪಾಲಿಗೆ....

ನಿನಗೇನಿಷ್ಟ
ಅದೇ
ಆಗಲಿ..
ನಮ್ಮೀ ಬದುಕು
ನಗು ನಗುತ
ಸಾಗಲಿ....

ಅಂದು ಮಾಡಿದ್ದಳು
ಆ ಸತಿ ಅವನಿಷ್ಟದ
ಹೋಳಿಗೆ..
ಮೆಲಕು ಹಾಕುವರಿಂದು
೫೦ ರ ಬಾಂಧವ್ಯದ
ಬಾಳಿಗೆ....

ಇಂದಿಗೂ ಅದೇ
ಒಪ್ಪಂದ
ಅವರ ದಾಂಪತ್ಯದಲಿ..
ಇಂದೂ ೫೦ರ
ಹೋಳಿಗೆಯ
ಊಟ ಸಂತ್ರಪ್ತದಲಿ....

Wednesday, August 15, 2012

ಶುಭಾಷಯ ..


ಅಂದು  ನೀ ಭುವಿಗೆ ಬಂದ ದಿನವೇ
ನೀ ನನಗೆ ನೀಡಿದೆ 'ಅಮ್ಮ' ಎಂಬ ಪದವಿ
ನಗುವಲ್ಲಿ ಆಳುವಲ್ಲಿ ಆಟ ನೋಟಗಳಲ್ಲಿ 
ನೀ ಕಳೆದೆ ನಾನನುಭವಿಸಿದಾ ನೋವ ..

ದಿನವುರುಳಿ ಹೋಗುತಿರೆ ಏರುತಿರೆ ತಂಟೆ 
ಹೊರಳಾಡಿ ಹರಿದಾಡಿ ಬಿದ್ದು ಒದ್ದಾಡಿ 
ಕುಳಿತು ನಿಂತು ಕುಣಿದಾಡಿ  ಓಡಾಡಿ 
ಆಗೇ ಹೋಯಿತು ನೋಡು ನಿನಗೊಂದು ವರ್ಷ...

ಆ ಸಂಭ್ರಮಕೆ ನಿನಗಿದೋ ನನ್ನ ಉಡುಗೊರೆ
ನಗುತಿರು ಹೀಗೆ ಮಂಜಿನ ಹಾಗೆ 
ಕಷ್ಟ ಅಂಜಲಿ ನಿನ್ನ ನಗುವ ನೋಡಿ 
ಇರಲಿ ಧೀರ್ಘಾಯುಷ್ಯ ನಿನ್ನ ಜೋಡಿ 

ಕುಗ್ಗದಿರು ಹಿಗ್ಗದಿರು ಕೊರಗದಿರು ಮರುಗದಿರು 
ಸ್ವಾಭಿಮಾನವ  ಬಿಡದಿರು ಮತ್ತೆ 
ಜನರೊಳಗೊಂದಾಗಿ ಬಾಳುವುದ ಕಲಿ ನೀನು 
ಬೆಳೆಯಮ್ಮ ನಾವೆಲ್ಲ ಹೆಮ್ಮೆ ಪಡುವಂತೆ ...

ಆಶೀರ್ವಾದದೊಂದಿಗೆ -
ಅಪ್ಪ-ಅಮ್ಮ 
(ನಭಾಳ 1ನೇ ವರ್ಷದ ಹುಟ್ಟಿದ ಹಬ್ಬ(ಜೂನ್ 14)  ಪ್ರಯುಕ್ತ)

Wednesday, August 1, 2012

ಬದುಕಿನ ದಾರಿ ...



ನಾವಂದು ಜೊತೆಯಾಗಿ ನಡೆದಂತ ಹಾದಿಯದು
ನೂರಾರು ಕನಸುಗಳ ನೆನಪಿಸುವ ಬೀದಿಯದು
ನೀನೊಮ್ಮೆ ತಿರುಗಿ ನೋಡಲ್ಲಿ ಹಾಸಿಹುದು ನಿನಗಾಗಿ 
ಕೆಂಪನೆಯ ರತ್ನಗಂಬಳಿ ಹಸಿರು ಮರಗಳ ನಡುವಲಿ..

ಹೋಗೋಣ ಇನ್ನೊಮ್ಮೆ ಜೊತೆಯಾಗಿ ಕೈ ಹಿಡಿದು
ಕಳೆಯೋಣ ಕ್ಷಣಗಳನು ಸಂಜೆಯ ಗಳಿಗೆಯಲಿ
ನೀನಂದು ನುಡಿದಂತ ಸಾಲನಿನ್ನೊಮ್ಮೆ ನೀಹೇಳು
ಕೇಳುವೆನು ತನ್ಮಯದಿ ನಿನ್ಹೆಗಲಿಗೊರಗಿ..

ಸುಖ ದುಃಖಗಳಲಿ ನಾನಿರುವೆ  ಜೊತೆಯಾಗಿ
ಬಾಳಲ್ಲಿ  ತುಂಬಿರಲಿ ಕಡಲಾಳದ ಪ್ರೀತಿ 
ನೆಮ್ಮದಿಯ ಜೀವನವು ನಮದಿರಲಿ ಅನುಗಾಲ
ಎಂದೆಂದೂ ಇರಲಿ ಜೀವನ ಇದೇ ರೀತಿ.. 

Thursday, December 8, 2011

ಪುಟ್ಟಿಯ ತಂಟೆ..

ಇವಳು ನಮ್ಮ ಮಗು...

ಏಳುವಾಗ ಮೊಗದಲ್ಲಿ ನಗು
ಜೊತೆ ಜೊತೆಯೇ ಕೇಕೆ ಕೂಗು..

ಇವಳಿಗಿಷ್ಟ ಎಣ್ಣೆಯ ಮಾಲಿಶ್
ಬೇಸರದಿ ಇದ್ದಾಗ ಮಾಡುವಳು ಪಾಲಿಶ್..

ತಲೆ ಮುಟ್ಟಿದರೆ ಬರುವುದು ಕೋಪ
ಸ್ನಾನ ಮಾಡುವಾಗ ಅಳುತ್ತಾಳೆ ಪಾಪ..

ಮುಖದಿ ತೋರುವಳು ವಿಧ ವಿಧದಾ ಭಾವ..
ನಗುವಾಗ ಇವಳು ಮಲ್ಲಿಗೆ ಹೂವ..

ಕವುಚಿ ಹಾಕಿದಾಗ ಜೋರು ಇವಳ ಕೂಗಾಟ..
ಎತ್ತಲು ಹೋದರೆ ಮಾಡುವಳು ರಂಪಾಟ..

ಕುಣಿಯುತ್ತಲೇ ಇರುವುದು ಪುಟ್ಟ ಕೈ ಕಾಲು..
ಕಾಲಲ್ಲೇ ಆಡುವಳು ಕೆಂಪನೆಯ ಬಾಲು..

ರೆಪ್ಪೆಯಾಡಿಸದೆ ನೋಡುವಳು ತಿರುಗುವ ಫ್ಯಾನು
ಬೇಕಂತೆ ಕೈಯ್ಯಲ್ಲಿ ಮೊಬೈಲ್ ಫೋನು..

ಮಾಂಗಲ್ಯದೊಡನೆ ಏನಿವಳ ಆಟ..
ತಪ್ಪಿಸಲು ಕೈ ಸಿಡುಕಿನ ನೋಟ..

ನಿಲ್ಲಿಸಿದರೆ ಮಾಡುವಳು ವಿಪರೀತ ಡೌಲು..
 ಪಪ್ಪ ಬರಲು ಏರುವಳು ಕಾಲು..
   
ಶುರುಮಾಡುವಳು ರಗಳೆ ಬರಲು ನಿದಿರೆ..
ಕಣ್ಣ ತುಂಬಿಳಿಯುವುದು ನೀರಧಾರೆ..

ಮಾಡುತ್ತಲೇ ಇರುವಳು ಏನಾದರೂ ತಂಟೆ..
ಸಾಲದು ದಿನದ ಇಪ್ಪತ್ನಾಲ್ಕು  ಗಂಟೆ..

ಇವಳು ನಮ್ಮ ಮಗು..
ಶುರುವಾಯಿತು ಇವಳ ಕೂಗು..

Tuesday, September 20, 2011

ಮರಳಿ ಬ್ಲಾಗಿಗೆ...

ತುಂಬಾ ದಿನಗಳ ನಂತರ ಹೊಸ ಕನಸಿನೊಂದಿಗೆ ಬ್ಲಾಗಿಗೆ ಮರಳುತ್ತಿದ್ದೇನೆ... ನಿಮ್ಮ ಸಹಕಾರ ಮೊದಲಿನಂತೆಯೇ ಇರಲಿ...

ನವ ಮಾಸ ಉದರದಲಿ
ಬೆಚ್ಚಗೆ ಮಲಗಿದ್ದು
ಹೊಸ ಆಸೆ ಹೊಮ್ಮಿಸುತ
ನಸು ನಗುತ 
ನೀ ಬರಲು...
ನಮ್ಮ ಕನಸುಗಳು
ನಿನ್ನ ಆಟಗಳೊಡನೆ
ಕೇಕೆಗಳೊಡನೆ 
ನನಸಾಗಲಿ...
ನಿನ್ನ ನಗು
ಹೀಗೆಯೇ ಹೊಮ್ಮಿರಲು
ಎಲ್ಲರ ಆಶೀರ್ವಾದ
ನಿನಗಿರಲಿ...  
      

Saturday, February 26, 2011

ನಾನೇನ ನೀಡಲಿ ಗೆಳೆಯಾ??

ಚಿತ್ರಕೃಪೆ: ಅಂತರ್ಜಾಲ

ಗೆಳೆಯಾ..

ನೀ ನೀಡಿದ ಮುತ್ತಿನ ಮಳೆಗೆ
ನಾ  ಏನ ನೀಡಲಿ ಕೊಡುಗೆ..?

ಬಾಳ ಬಂಡಿಯಲಿ ಜೊತೆಯಾದ ಸುಂದರ
 ಮನಸಿನ ಮಂದಿರಕೆ ನೀನಾದೆ ಸರದಾರ..


ಹರಿಸಿದೆ ಪ್ರೇಮದ ಮಹಾಪುರ
 ಪೋಣಿಸಿದೆ ಆಸೆಯ ನೂಪುರ..

ಹಾಲು ಜೇನಂಥ ಅನುಬಂಧವ ಬೆಸೆದೆ
  ಕನಸಿಗೆ ಕನಸ ಜೊತೆಯಲ್ಲೇ ಹೊಸೆದೆ..

ಕಣ್ಣಲ್ಲಿ ಕಣ್ಣಿಟ್ಟು ಹರಿಸಿದೆ ಒಲವ
  ಭಾವನೆಗಳ ಪೋಷಿಸಿದ ಚೆಲುವ..

ಜೀವನದ ಹಾದಿಗೆ ನೀ ಹಾಸಿದೆ ರತ್ನಗಂಬಳಿ
     ಹೇಳು ನಾನೇನ ನೀಡಲಿ ನಿನಗಾಗಿ ಬಳುವಳಿ..?      
  

   


Tuesday, December 7, 2010

ಮೌನದ ಮನೆ ಸೇರಿದಾಗ....

ಮನದ ಹಕ್ಕಿ 
ರೆಕ್ಕೆ ಬಿಚ್ಚಿ 
ಹಾರಬಯಸಿದೆ..
ನೋಟದಲ್ಲೇ  ಮುದ್ದುಗರೆವ 
ಗೆಳೆಯನಪ್ಪುಗೆ
ಬಯಸಿದೆ..
ಬಾಂದಳದ ಚಂದ್ರ 
ನಮ್ಮನೋಡಿ 
ನಕ್ಕಂತೆನಿಸಿದೆ..
ಅಲೆ ಅಲೆಯಾಗಿ 
ಬೀಸೋ ಗಾಳಿ 
ಏನೋ ಹೇಳಿದಂತಿದೆ..
ಜಾಜಿ ಹೂವು ಪಾರಿಜಾತ 
ಬಿರಿದು 
ಹಾರೈಸಿದಂತಿದೆ.. 
ಬೆರಳುಗಳೊಳಗೆ 
ಬೆರಳ ಬೆರೆಸೆ
ಪ್ರೀತಿ ಮಾತು ಮೂಡಿದೆ..
ದೂರದಿಂದ 
ಕೇಳುತಿಹ  ಹಾಡು 
ಮಧುರವಾಗಿದೆ..
ಅರಳುತಿರುವ 
ಮಲ್ಲೆ ಮೊಗ್ಗು ಈ 
ಖುಷಿಯ ಜೊತೆಗಿದೆ.. 
ನಿನ್ನ ತೋಳ 
ಬಂಧಿಯಾಗೆ 
   ಮೌನ ಮನೆಯ ಮಾಡಿದೆ..

Tuesday, October 19, 2010

ಏತಕೆ ಈ ಮೌನ..???



                                                      ಮನದ ಮಂದಿರದಲ್ಲಿ ಮೀಟುವೆ ನಾದವ
                                            ಮೊಗದಲ್ಲೇಕೆ ಈರೀತಿ ಮೌನ....
                                            ತಂತಿಯು ನುಡಿಸುತಿರಲು ರಾಗವ 
                                            ಹಾಡಲಾರೆಯಾ ಒಂದು ಕವನ...

                                                   ನಿನ್ನ ಕಣ್ಣ ಓರೆ ನೋಟ
                                                   ನೀಳ ಮೂಗು ಎಂತ ಮಾಟ...
                                                   ಮುಂಗುರುಳ ಅಲೆದಾಟ
                                                   ಮನದಲ್ಲಿ ತೊಳಲಾಟ...
            
                                             ತಲೆಯಲ್ಲಿ ಹಣ್ಣ ಬುಟ್ಟಿ
                                             ಎಲ್ಲೋ ನೋಡುವ ನಿನ್ನ ದಿಟ್ಟಿ...
                                             ನುಡಿಸುತಿರಲು ನೀ ತಂಬೂರಿ
                                             ಕುಣಿಯುತಿದೆ ಮನದ ಮಯೂರಿ...

Wednesday, October 6, 2010

ಯಾರು???


ಎಲ್ಲಾ ವಿಸ್ಮಯವು, ಸೋಜಿಗವು ಈ ಜಗದ ಒಳಗೆ...

ಮೂಡುವ ಸೂರ್ಯಗೆ ಬಣ್ಣವ ಬಳಿದವರಾರು?
ಹಾರುವ ಹಕ್ಕಿಗೆ ಹಾಡುವುದ ಕಲಿಸಿದವರಾರು?
ಮರದಲಿರುವ ಹಣ್ಣಿಗೆ ಸಿಹಿಯ ತುಂಬಿದವರಾರು?
ಹರಿವ ನೀರಿಗೆ ಕಲರವದ ದನಿ ಕೊಟ್ಟವರಾರು?

ಚೆಂದದ ಹೂವಿಗೆ ಸುವಾಸನೆಯ ನೀಡಿದವರಾರು?
ಹುಣ್ಣಿಮೆಯಲಿ ಆಗಸಕೆ ಚಂದಿರನ ಕಳಿಸಿದವರಾರು?
ಮೀನಿಗೆ ನೀರಿನಲಿ ಈಜುವುದ ಹೇಳಿಕೊಟ್ಟವರಾರು?
ದುಂಬಿಗೆ ಹೂವ ತೋರಿಸಿ ಕೊಟ್ಟವರಾರು?

ನೀಲಾಕಾಶದಿ ಮೋಡಗಳ ನಿಲ್ಲಿಸಿ ಬಂದವರಾರು?
ಪುಟ್ಟ ಕರುವಿಗೆ 'ಅಂಬಾ' ಎನ್ನುವುದ ಹೇಳಿಕೊಟ್ಟವರಾರು?
ಗಿಡದ ಮೊಗ್ಗನ್ನು ಬಂದು ಅರಳಿಸಿ ಹೋದವರಾರು?
ಬಣ್ಣದ ಚಿಟ್ಟೆಗೆ ಹಾರುವುದ ಕಲಿಸಿದವರಾರು?

ತೆಂಗಿನ ಕಾಯಲಿ ನೀರನು ತುಂಬಿ ಇಟ್ಟವರಾರು?
ಕೋಗಿಲೆಗೆ ಸುಂದರ ಧ್ವನಿಯ ನೀಡಿದವರಾರು?
ಮರಗಳಿಗೆ ಹಸಿರು ಎಲೆಯ ಜೋಡಿಸಿದವರಾರು?
ನನಗೆ ಇದಕ್ಕೆಲ್ಲ ಉತ್ತರವ ತಿಳಿಸುವವರಾರು?